ಸುದ್ದಿ ಸಂಗಮ
- Get link
- X
- Other Apps
ಕೆ.ಆರ್.ಪೇಟೆ: ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ವತಿಯಿಂದ ಕರೆ ನೀಡಲಾಗಿದ್ದ ಕೆ.ಆರ್.ಪೇಟೆ ಬಂದ್ ಸಂಪೂರ್ಣ ಯಶಸ್ವಿಯಾಗಿ ನಡೆಯಿತು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಂದ್ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಪ್ರಗತಿಪರ ಹಾಗೂ ದಲಿತಪರ ಸಂಘಟನೆಗಳು, ವಕೀಲರ ಸಂಘ, ಪತ್ರಕರ್ತರ ಸಂಘಟನೆಗಳು, ಎಳನೀರು ವ್ಯಾಪಾರಿಗಳ ಸಂಘ, ರಾಜಸ್ತಾನ ಸಮಾಜ ಸೇವಾ ಸಂಘ, ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿ, ಕಾರ್ಯಕರ್ತರು ಹೋರಾಟದಲ್ಲಿ ಭಾಗಿಯಾಗಿದ್ದರು.
ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ವಕೀಲರು ನ್ಯಾಯಾಲಯಗಳ ಕಲಾಪ ಬಹಿಷ್ಕಾರ ಮಾಡಿ ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ಚಳುವಳಿ ನಡೆಸಿದರು.
ಬಂದ್ ಅಂಗವಾಗಿ ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಮೈಸೂರು- ಚನ್ನರಾಯಪಟ್ಟಣ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಮಧ್ಯಾಹ್ನ 2ಗಂಟೆಯವರೆಗೆ ರಸ್ತೆ ತಡೆ ಚಳುವಳಿ ನಡೆಸಿದರು.
ತಾಲ್ಲೂಕು ರಾಜಸ್ಥಾನ್ ಸಮಾಜ ಸಂಘದ ಪದಾಧಿಕಾರಿಗಳು ಮುಖಂಡರಾದ ಧರ್ಮೇಂದ್ರ, ಲಕ್ಷ್ಮಣ್, ಸೋಹನ್ ಪಟೇಲ್ ನೇತೃತ್ವದಲ್ಲಿ ರಸ್ತೆ ಬದಿಯಲ್ಲೆ ಅಡುಗೆ ತಯಾರಿಸಿ ಊಟ ಮಾಡಿ ಪ್ರತಿಭಟನೆ ನಡೆಸಿದರು.
*ಶಾಸಕ ಮಂಜು ಬೆಂಬಲ*: ಪ್ರತಿಭಟನೆಗೆ ಶಾಸಕ ಹೆಚ್.ಟಿ.ಮಂಜು ಅವರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಕಾವೇರಿ-ಹೇಮಾವತಿ ನೀರಿನ ಉಳಿವಿಗಾಗಿ ಯಾವುದೇ ಹೋರಾಟಕ್ಕೂ ತಾವು ಸಿದ್ದವಿರುವುದಾಗಿ ತಿಳಿಸಿದರು. ಈಡೇರಿಸಲು ಆಗದೇ ಇರುವ ಆದೇಶವನ್ನು ಸುಪ್ರೀಂ ಕೋರ್ಟ್ ನೀಡಿದರೆ ಅದನ್ನು ತಿರಸ್ಕರಿಸಿದರೆ ಅದು ನ್ಯಾಯಾಂಗ ನಿಂದನೆಯಾಗದು ಹಾಗಾಗಿ ರಾಜ್ಯ ಸರ್ಕಾರವು ತಮಿಳುನಾಡಿಗೆ ಹನಿ ನೀರನ್ನು ಬಿಡಬಾರದು. ಅದೇ ನೀರನ್ನು ನಮ್ಮ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಕೆರೆ ಕಟ್ಟೆಗಳಿಗೆ ತುಂಬಿಸಬೇಕು ಎಂದು ಶಾಸಕ ಮಂಜು ಒತ್ತಾಯಿಸಿದರು.
ಪ್ರವಾಸಿ ಮಂದಿರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ ನಡೆಸಿದ ಹೋರಾಟಗಾರರು ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸುಪ್ರಿಂ ಕೋರ್ಟ್ ಮತ್ತು ಕಾವೇರಿ ನೀರು ಹಂಚಿಕೆ ಪ್ರಾಧಿಕಾರದಿಂದ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಕುರಿತು ಮಾತನಾಡಿ ತಮಿಳುನಾಡು, ಸುಪ್ರಿಂ ಕೋರ್ಟ್ ಹಾಗೂ ನೀರಾವರಿ ಪ್ರಾಧಿಕಾರದ ನಡಾವಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಕಾವೇರಿ ಮತ್ತು ಹೇಮಾವತಿ ನದಿ ಪಾತ್ರದಲ್ಲಿ ಮಳೆ ಇಲ್ಲದೇ ಬರಗಾಲ ಆವರಿಸಿದೆ. ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ ತಮಿಳುನಾಡು ಕುರುವೈ ಬೆಳೆಗೆ ನೀರು ಕೇಳುತ್ತಿರುವುದು ನ್ಯಾಯವಾದ ಬೇಡಿಕೆಯಲ್ಲ. ಯಥೇಚ್ಛವಾಗಿ ಮಳೆಯಾದರೆ ತಮಿಳುನಾಡಿಗೆ ನೀರು ಹರಿಸಲು ನಮಗೆ ಯಾವುದೇ ತೊಂದರೆ ಇಲ್ಲ. ನಮಗೆ ಕುಡಿಯಲು ನೀರಿಲ್ಲದಿರುವಾಗ ಬೇಸಾಯಕ್ಕೆ ನೀರು ಬಿಡಿ ಎಂದು ಸುಪ್ರಿಂ ಕೋರ್ಟ್ ಹಾಗೂ ನೀರು ಹಂಚಿಕೆ ಪ್ರಾಧಿಕಾರ ಕುರುಡು ಆದೇಶ ನೀಡುವ ಮೂಲಕ ಕನ್ನಡಿಗರ ಸಹನೆ ಕೆಣಕುತ್ತಿರುವುದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಪ್ರತಿಭಾನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ, ಹೇಮಾವತಿ. ಕಬಿನಿ ನದಿ ಪಾತ್ರದ ಅಭಿವೃದ್ಧಿಗೆ ತಮಿಳುನಾಡು ಕೊಡುಗೆ ಏನು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಕಾವೇರಿ ನೀರು ಕೇಳುವ ತಮಿಳುನಾಡು ನೀರು ಸಂಗ್ರಹಿಸುವ ಅಣೆಕಟ್ಟೆಗಳ ಅಭಿವೃದ್ಧಿ ನನ್ನ ಕೊಡುಗೆ ಏನಿದೆ ಎಂದು ಪ್ರಶ್ನಿಸಿಕೊಳ್ಳಬೇಕು. ಬ್ರಿಟೀಷರ ಕಾಲದ ಕಾವೇರಿ ನೀರಿನ ಒಪ್ಪಂದವನ್ನು ಇಷ್ಟು ದಿನ ಜೀವಂತವಾಗಿ ಇಟ್ಟಿದ್ದು ಮಹಾ ಅಪರಾಧವಾಗಿದೆ. ಇನ್ನಾದರೂ ಬ್ರೀಟೀಷರ ಕಾಲದ ಒಪ್ಪಂದವನ್ನು ರದ್ದು ಮಾಡಬೇಕು. ಶೇ.100ರಷ್ಟು ನೀರನ್ನು ಕಾವೇರಿ ನೀರನ್ನು ಕರ್ನಾಟಕ ರಾಜ್ಯವೇ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಪ್ರತಿಭಟನಾ ಕಾರರು ಸರ್ಕಾರವನ್ನು ಆಗ್ರಹಿಸಿದರು.
ಮೆಡಿಕಲ್, ಆಸ್ಪತ್ರೆ, ಆಂಬುಲೆನ್ಸ್, ಹೊರತು ಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು, ಬಾರ್ ಗಳು, ಸಿನಿಮಾ ಟಾಕೀಸ್ ಗಳು, ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ ಯಿಂದಲೇ ಸಂಜೆಯವರೆವಿಗೂ ಸ್ವಯಂ ಪ್ರೇರಿತವಾಗಿ ಮುಚ್ಚಿ ಕೆ.ಆರ್.ಪೇಟೆ ಬಂದ್ ಗೆ ಸಹಕಾರ ನೀಡಿದರು.
*ಶಾಲಾ-ಕಾಲೇಜುಗಳಿಗೆ ರಜೆ*: ಕೆ.ಆರ್.ಪೇಟೆ ಬಂದ್ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆಯಾಯ ಶಾಲಾ-ಕಾಲೇಜು ಆಡಳಿತ ಮಂಡಳಿಯವರು ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಬಂದ್ ಗೆ ತಮ್ಮ ಬೆಂಬಲ ಸೂಚಿಸಿದರು.
ಇಂಜಿನಿಯರಿಂಗ್ ಕಾಲೇಜು ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ಮಾಡಿ ಕಾವೇರಿ-ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಚಳುವಳಿಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯಲ್ಲಿ ಕಾವೇರಿ-ಹೇಮಾವತಿ ಹಿತರಕ್ಷಣಾ ಸಮಿತಿಯ ಸಂಚಾಲಕ ತಾಲ್ಲೂಕು ರೈತ ಸಂಘದ ಮುಖಂಡರಾದ ಕೆ.ಆರ್.ಜಯರಾಂ, ಮರುವನಹಳ್ಳಿ ಶಂಕರ್, ಕಾರಿಗನಹಳ್ಳಿ ಪುಟ್ಟೇಗೌಡ, ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರದ ಪೀಠಾಧಿಪತಿ ಶ್ರೀ ರುದ್ರಮುನಿ ಸ್ವಾಮೀಜಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ಅರ್.ರವಿಶಂಕರ್, ಹಿರಿಯ ವಕೀಲರಾದ ಬಿ.ಎಲ್.ದೇವರಾಜು,ಬಿ.ಗಣೇಶ್, ಹೆಚ್.ರವಿ, ಕೆ.ಎನ್. ನಾಗರಾಜು,
ದೇವರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಮನ್ ಮುಲ್ ನಿರ್ದೇಶಕ ಡಾಲು ರವಿ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್, ತಾಲ್ಲೂಕು ಬಿಜೆಪಿ ಮುಖಂಡ ಶೀಳನೆರೆ ಭರತ್, ತಾ.ಪಂ.ಮಾಜಿ ಸದಸ್ಯ ಮಾಂಬಹಳ್ಳಿ ಅಶೋಕ್, ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಎಸ್.ವೇಣು, ಸಿ.ಬಿ.ಚೇತನ್ ಕುಮಾರ್, ಮದನ್, ತಾಲ್ಲೂಕು ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಸಮೀರ್, ಜಿಲ್ಲಾ ಉಪಾಧ್ಯಕ್ಷ ಎ.ಸಿ.ಕಾಂತರಾಜು, ತಾಲ್ಲೂಕು ಉಪಾಧ್ಯಕ್ಷ ಪಿ.ಕೆ.ಜಿ.ಮಹೇಶ್, ಅಮ್ಜದ್ ಖಾನ್, ಆರ್.ಎಂ.ದೇವಾನಂದ್,ಆಟೋ ಘಟಕದ ವಾಸು, ಜಾವಿದ್, ದಯಾನಂದರಾವ್, ಮಹಿಳಾ ಘಟಕದ ಮಂಗಳಾ, ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಪ್ರಶಾಂತ್, ಉಪಾಧ್ಯಕ್ಷ ಪೃಥ್ವಿ, ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೆಚ್.ಆರ್.ಸೋಮಶೇಖರ್, ತಾಲ್ಲೂಕು ದಲಿತ ಸಂಘಟನೆಗಳ ಮುಖಂಡರಾದ ಬಂಡಿಹೊಳೆ ರಮೇಶ್, ಸಿಂಧಘಟ್ಟ ಸೋಮಸುಂದರ್, ಬೀಮ್ ಸೇನೆ ಅಧ್ಯಕ್ಷ ಗಣೇಶ್, ಸಾಯಿಕುಮಾರ್, ತಾಲ್ಲೂಕು ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತಾಲ್ಲೂಕು ಜನಜಾಗೃತಿ ಹೋರಾಟ ವೇದಿಕೆಯ ಸಂಚಾಲಕ ಮಾಕವಳ್ಳಿ ಕುಮಾರಸ್ವಾಮಿ, ತಾಲ್ಲೂಕು ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ನಾಟನಹಳ್ಳಿ ಗಂಗಾಧರ್, ಮಹಿಳಾ ಘಟಕದ ಅಧ್ಯಕ್ಷೆ ಮೂಡನಹಳ್ಳಿ ಮಧುಶ್ರೀ, ಮಹಿಳಾ ಒಕ್ಕಲಿಗರ ಸಂಘದ ಪ್ರೇಮನಾಗರಾಜು, ತಾಲ್ಲೂಕು ಎಳೆನೀರು ವ್ಯಾಪಾರಿಗಳ ಸಂಘದ ಪುಟ್ಟಣ್ಣ ತಾಲ್ಲೂಕು ರಾಜಸ್ತಾನ ಸಮಾಜ ಸೇವಾ ಸಂಘದ ಧರ್ಮೇಂದ್ರ, ಲಕ್ಷ್ಮಣ್, ಸೋಹನ್ ಪಟೇಲ್, ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಹೆಚ್.ವಿ.ಮಂಜುನಾಥ್, ಜಬೀಉಲ್ಲಾ, ತಾಲ್ಲೂಕು ಕುಂಚ ಕಲಾವಿದರ ಸಂಘದ ಹರೀಶ್, ಮುರುಗೇಶ್, ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಜೀರ್ ಅಹಮದ್, ಮಾಕವಳ್ಳಿ ವಸಂತಕುಮಾರ್, ತಾಲ್ಲೂಕು ಟಿಎಪಿಸಿಎಂಎಸ್ ನಿರ್ದೇಶಕರಾದ ಬಲದೇವ್, ಬಿ.ಮಂಜು, ಹೆಚ್.ಟಿ.ಲೋಕೇಶ್, ಸ್ಟಿಚ್ ವೇರ್ ಕುಮಾರ್, ಸೇರಿದಂತೆ ವಿವಿಧ ಸಂಘಟನೆಗಳ ಸಾವಿರಾರು ಪ್ರತಿಭಟನಾಕಾರರು ಹೋರಾಟದಲ್ಲಿ ಭಾಗವಹಿಸಿದ್ದರು.
*ಕಚೇರಿಗಳ ಮುಂದೆ ಪ್ರತಿಭಟನೆ*
ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷ ಸಮೀರ್ ನೇತೃತ್ವದಲ್ಲಿ ತಾಲ್ಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ, ಪುರಸಭಾ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಬಂದ್ ಗೆ ಸಹಕರಿಸುವಂತೆ ಮನವಿ ಮಾಡಿದಾಗ ಅಧಿಕಾರಿಗಳು ಸ್ಪಂದಿಸಿ ಬೆಂಬಲ ಸೂಚಿಸಿದರು.
*ಅಂಚೆ ಕಚೇರಿ ಅಧಿಕಾರಿಗಳಿಗೆ ಬಿಸಿ*:
ಪಟ್ಟಣದ ಪ್ರಧಾನ ಅಂಚೆ ಕಚೇರಿಯಲ್ಲಿ ಬಂದ್ ಗೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಬಾಗಿಲು ತೆರೆದು ಕರ್ತವ್ಯ ನಿರ್ವಹಿಸುತ್ತಿದ್ದ ವಿಚಾರ ತಿಳಿದು ಅಂಚೆ ಕಚೇರಿಗೆ ತೆರಳಿದ ನೂರಾರು ಪ್ರತಿಭಟನಾಕಾರರು ಅಂಚೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡು ನಿಮಗೆ ಕುಡಿಯಲು ನೀರು ಬೇಡವೇ ಬೇಕಿದ್ದರೆ ಬಂದ್ ಗೆ ಸಹಕರಿಸಿ ಎಂದು ಹೇಳಿದಾಗ ತಕ್ಷಣ ಸ್ಪಂದಿಸಿ ಕಚೇರಿ ಬಾಗಿಲು ಬಂದ್ ಮಾಡಿ ಬಂದ್ ಗೆ ತಮ್ಮ ಬೆಂಬಲ ಸೂಚಿಸಿದರು.
ರಾಜಸ್ತಾನ್ ಸಮಾಜ ಸಂಘದ ಪದಾಧಿಕಾರಿಗಳು ಸ್ವಯಂಪ್ರೇರಿತರಾಗಿ ಪ್ರತಿಭಟನಾಕಾರರಿಗೆ ಊಟದ ವ್ಯವಸ್ಥೆ ಮಾಡಿ, ಕುಟುಂಬ ಸಮೇತರಾಗಿ ಹೋರಾಟದಲ್ಲಿ ಭಾಗವಹಿಸಿದ್ದಕ್ಕೆ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.
- Get link
- X
- Other Apps