ಸೆ.26ರ ಕೆ.ಆರ್.ಪೇಟೆ ಬಂದ್ ಕರವೇ ಸ್ವಾಭಿಮಾನಿ ಸೇನೆ ಸಂಪೂರ್ಣ ಬೆಂಬಲ: ಅಧ್ಯಕ್ಷ ಸಮೀರ್
ಕೆ.ಆರ್.ಪೇಟೆ: ತಾಲ್ಲೂಕು ಕಾವೇರಿ-ಹೇಮಾವತಿ ನೀರು ಉಳಿಸಿ ಹೋರಾಟ ಸಮಿತಿ ವತಿಯಿಂದ ಕರೆಯಲಾಗಿರುವ ಸೆ.26ರ ನಡೆಯಲಿರುವ ಕೆ.ಆರ್.ಪೇಟೆ ಬಂದ್ ಗೆ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಪಟ್ಟಣದ ಕರವೇ ಸ್ವಾಭಿಮಾನಿ ಸೇನೆ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆ ತಾಲ್ಲೂಕು ಅಧ್ಯಕ್ಷ ಸಮೀರ್, ಜಿಲ್ಲಾ ಉಪಾಧ್ಯಕ್ಷ ಎ.ಸಿ.ಕಾಂತರಾಜು, ಕಾನೂನು ಸಲಹೆಗಾರ ವಕೀಲ ಅರ್.ಎನ್.ದೇವಾನಂದ್, ಸಂಘಟನಾ ಕಾರ್ಯದರ್ಶಿ ಅಮ್ಜದ್ ಖಾನ್, ಕಾರು ಮಾಲೀಕರು ಮತ್ತು ಚಾಲಕರ ಘಟಕದ ಅಧ್ಯಕ್ಷ ಪಿ.ಕೆ.ಜಿ.ಮಹೇಶ್, ಕಾರ್ಮಿಕರ ಘಟಕದ ದಯಾನಂದರಾವ್, ಆಟೋ ಘಟಕದ ಕೆ.ಎನ್.ವಾಸುದೇವ್, ಆಟೋ ಜಾವಿದ್ ಮತ್ತಿತರರು ಕಾವೇರಿ ಕೊಳ್ಳದಲ್ಲಿ ಮಳೆ ಇಲ್ಲದೇ ಜನ-ಜಾನುವಾರುಗಳಿಗೆ ನೀರಿಲ್ಲದೇ ತೀವ್ರ ಹಾಹಾಕಾರ ಉಂಟಾಗಿದೆ. ಆದರೂ ಕೇಂದ್ರ ನದಿ ನೀರು ಹಂಚಿಕೆ ಪ್ರಾಧಿಕಾರ ಹಾಗೂ ಸುಪ್ರಿಂ ಕೋರ್ಟ್ ತಮಿಳುನಾಡಿಗೆ ನಿತ್ಯ 5ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ನೀರು ಬಿಡುವಂತೆ ಆದೇಶ ಮಾಡುವ ಮೊದಲು ಕಾವೇರಿ ಕಣಿವೆಯ ನೀರು ಸಂಗ್ರಹ ಪರಿಸ್ಥಿತಿಯನ್ನು ಖುದ್ದು ಪರಿಶೀಲನೆ ನಡೆಸಿ ನಂತರ ತೀರ್ಪು ನೀಡಬೇಕು ಆದರೆ ಕರ್ನಾಟಕದಲ್ಲಿ ಬರಗಾಲ ಇದ್ದರೂ ಸಹ ತಮಿಳುನಾಡಿಗೆ ನೀರು ಬಿಡಲು ಆದೇಶ ನೀಡಿರುವುದು ಕಾವೇರಿ, ಹೇಮಾವತಿ, ಕಬಿನಿ ಅಚ್ಚುಕಟ್ಟು ರೈತರಿಗೆ ಮರಣ ಶಾಸನವಾಗಿದೆ. ಹಾಗಾಗಿ ನಾವು ಹೋರಾಟದ ಮೂಲಕ ನಮ್ಮ ಕಾವೇರಿ, ಹೇಮಾವತಿ ನೀರನ್ನು ಹೋರಾಟದ ಮೂಲಕ ಪಡೆದು ಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ ಆದ್ದರಿಂದ ಕೆ.ಆರ್.ಪೇಟೆಯಲ್ಲಿ ವಿವಿಧ ಸಂಘಟನೆಗಳು ಸೆ.26ರ ಮಂಗಳವಾರ ಕರೆ ನೀಡಿರುವ ಕೆ.ಆರ್.ಪೇಟೆ ಬಂದ್ ಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬಂದ್ ಅಂದವಾಗಿ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದೆ ಎಂದು ತಾಲ್ಲೂಕು ಕರವೇ ಸ್ವಾಭಿಮಾನಿ ಸೇನೆಯ ಅಧ್ಯಕ್ಷ ಸಮೀರ್ ತಿಳಿಸಿದರು.